ಯುವಲಹರಿ: ಸಂಪಾದಕೀಯ

ಸಾಮಾನ್ಯ

ಯುವಲಹರಿಯ ಅಯ್ದ ಬರಹಗಳ ಸಂಕಲನ ಪುಸ್ತಕ ರೂಪದಲ್ಲಿ ಹೊರಬಂದಿದೆ. ಖ್ಯಾತ ಲೇಖಕಿ ರೂಪ ಹಾಸನ ಮುನ್ನುಡಿ ಬರೆದಿದ್ದಾರೆ….

ಪುಸ್ತಕಕ್ಕಾಗಿ ಬರೆದ ಸಂಪಾದಕೀಯ ಇಲ್ಲಿದೆ; ಓದಿಕೊಳ್ಳಿ…

ಲಹರಿ ಹರಿಸುವ ಮುನ್ನ…

ಓದುಗರಿಗೆ ನಮಸ್ಕಾರ,

ಜಾಗತೀಕರಣ, ಆಧುನಿಕೀಕರಣಗಳ ಹಿಂದೆ ನಾವೆಲ್ಲರೂ ಓಡುತ್ತಿರುವ ಈ ದಿನಗಳಲ್ಲಿ ಸಾವಿರಾರು ವರ್ಷಗಳ ಬೆಳವಣಿಗೆಯ ಸತ್ಫಲವಾದ ಸಂಸ್ಕೃತಿ, ಪರಂಪರೆಗೆ ಅಪಾಯ ಒದಗಿದೆ. ಹೊಸತಿಗೆ ತೆರೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಹಳೆಯದ್ದರ ಬಗ್ಗೆ ಅಸಡ್ಡೆ ಕಂಡುಬರುತ್ತಿದೆ. ಹಳೆಯದ್ದರ ಒಳಿತುಗಳನ್ನೆಲ್ಲ ಹೊಸಕಾಲದಲ್ಲೂ ಮುಂದುವರಿಸುವ ಬಗೆಗೆ ನಮ್ಮ ಯುವಜನರಲ್ಲಿ ನಿರಾಸಕ್ತಿಮೂಡುತ್ತಿದೆ. ಹೀಗಾಗಿ ಸಂಸ್ಕೃತಿಯ ಜೊತೆಗೇ ಬೆಳೆಯುತ್ತ ಬಂದ ಭಾಷೆಯೂ ಅಪಾಯಕ್ಕೆ ಸಿಲುಕುತ್ತಿದೆ. ಅನಿವಾರ್ಯತೆಯೋ ಇಲ್ಲಾ ನಾವೇ ಮಾಡಿಕೊಂಡ ನಿವಾರ್ಯ ಕಾರಣಗಳಿಗೋ ಪರಭಾಷೆಯ ಹಿಂದೆ ಬಿದ್ದ ನಾವು ನಮ್ಮ ಸಂಸ್ಕೃತಿಯನ್ನು, ಅದರ ವಾಹಕವಾದ ಭಾಷೆಯನ್ನೂ ಮರೆಯುತ್ತಿದ್ದೇವೆ.

ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಕೃಷಿಯಲ್ಲೂ ಕಳೆದೈದಾರು ದಶಕಗಳಿಂದ ಕ್ಷಿಪ್ರ ಬದಲಾವಣೆಗಳಾಗುತ್ತಿವೆ. ಮಣ್ಣಿಗೇ ಇಳಿಯದ ವಿಜ್ಞಾನಿಗಳ ಕೆಲವೇ ತಿಂಗಳ ಸಂಶೋಧನೆ, ಸಲಹೆ ಕೇಳಿ ಸಾವಿರಾರು ವರ್ಷಗಳ ರೈತರ ಅನುಭವದ ಸಾರಗಳನ್ನು ಅವೈಜ್ಞಾನಿಕವೆನ್ನುತ್ತಿದ್ದೇವೆ. ಜವಾಬ್ದಾರಿಯುತ ಕೃಷಿ ವಿಜ್ಞಾನಿಗಳನ್ನು ತಯಾರು ಮಾಡಬೇಕಾದ ಕೃಷಿ ಕಾಲೇಜುಗಳ ವಿದ್ಯಾರ್ಥಿಗಳನ್ನೊಮ್ಮೆ ಮಾತನಾಡಿಸಿದರೆ ಪ್ರಜ್ಞಾವಂತರಿಗೆ ನಿಜಕ್ಕೂ ಬೇಸರ ಹುಟ್ಟುತ್ತದೆ. ಬಹುತೇಕರು ಕೃಷಿಯ ಮೂಲದಿಂದ ಬಂದವರೇ ಅದರೂ ನೆಲಮೂಲ ಜ್ಞಾನ ಇರುವುದಿಲ್ಲ. ಆಧುನಿಕ ಕೃಷಿಯ ಬಗ್ಗೆ ಬಾಯಿಪಾಠ ಒಪ್ಪಿಸುವ ಇವರಿಗೆ ಫುಕುವೋಕಾನ ‘ಒಂದು ಹುಲ್ಲಿನ ಕ್ರಾಂತಿ’ಯ ಬಗ್ಗೆ ಗೊತ್ತಿಲ್ಲ. ಎಲ್ಲೋ ಓದಿ ಎಂಡೋಸಲ್ಫಾನ್ ಬಳಸಲು ಆದೇಶಿಸುವವರಿಗೆ ಕಾಸರಗೋಡಿನ ಕಂದಮ್ಮಗಳ ಸಂಕಟ ಅರ್ಥವಾಗುವುದಿಲ್ಲ. ಕುಲಾಂತರಿಗಳ ಬಗ್ಗೆ ಹೆಮ್ಮೆಯಿಂದ ಹೇಳುವವರಿಗೆ ರೈತರು ಖಾಸಗೀ ಕಂಪನಿಗಳ ಕಪಿಮುಷ್ಟಿಗೆ ಸಿಲುಕಿದ್ದರ ಅರಿವಿಲ್ಲ….

ಯಾಕೆ ಹೀಗಾಯ್ತು… ?

ಇಂಥದೇ ಒಂದಿಷ್ಟು ಪ್ರಶ್ನೆಗಳಿಗೆ ಪ್ರಾಯೋಗಿಕವಾಗಿ ಉತ್ತರಿಸುವ ಸಲುವಾಗಿ ಕೃಷಿ ಮಹಾವಿದ್ಯಾಲಯ ಹಾಸನದಲ್ಲಿ ಕನ್ನಡ ಸಂಘ ಹುಟ್ಟಿಕೊಂಡಿತು. ಕೇವಲ ಯಾರೂ ಓದದ ‘ಪಿಓಪಿ’ಗಳನ್ನಷ್ಟೇ ಬರೆಯುವವರ ಬದಲು ಜವಾಬ್ದಾರಿಯುತ ಬರಹಗಳನ್ನು ಸೃಷ್ಟಿಸುವಂತಹ ಹೊಸ ಪೀಳಿಗೆಯನ್ನು ರೂಪಿಸುವುದು ನಮ್ಮ ಉದ್ದೇಶ. “ಕೃಷಿ ಪತ್ರಿಕೋದ್ಯಮದಲ್ಲಿನ ಒಂದು ಸಣ್ಣ ತಪ್ಪು ಕೂಡಾ ಸಾವಿರಾರು ಬಟ್ಟಲುಗಳ ಅನ್ನವನ್ನು ಕಸಿಯಬಲ್ಲದು” ಎಂಬ ‘ಶ್ರೀ’ಪಡ್ರೆಯವರ ಮಾತು ನಮಗೆ ದಾರಿದೀಪ.

ಕಳೆದ ಮೂರು ವರ್ಷಗಳಿಂದ ನಮ್ಮೀ ಪ್ರಯತ್ನ ಜಾರಿಯಲ್ಲಿದೆ. ವಿದ್ಯಾರ್ಥಿಗಳು ವಿಜ್ಞಾನ-ಕೃಷಿಯ ಬಗೆಗಷ್ಟೇ ಅಲ್ಲ, ಕವಿತೆ-ಪ್ರಬಂಧಗಳನ್ನೂ ಬರೆದು ಹಲವು ಹಿರಿಯರಿಂದ ‘ಸೈ’ ಅನಿಸಿಕೊಂಡಿದ್ದಾರೆ. ಯುವ ಮನಸ್ಸುಗಳನ್ನು ಕಾಡುವ ತವಕ, ತಲ್ಲಣ, ಕಾತರ, ಕುತೂಹಲ, ಸಂತಸಗಳನ್ನೆಲ್ಲಾ ಅಕ್ಷರ ರೂಪದಲ್ಲಿ ದಾಖಲಿಸಿದ್ದಾರೆ. ಹಲವರ ಬರಹಗಳು ಪತ್ರಿಕೆಗಳಲ್ಲೂ ಬೆಳಕು ಕಂಡಿವೆ.

ನಮ್ಮೀ ಪ್ರಯತ್ನವನ್ನು ಪಸರಿಸುವ ಸಲುವಾಗಿ ‘ಯುವಲಹರಿ’ (www.yuvalahari.tk) ಎಂಬ ಜಾಲತಾಣವನ್ನು ರೂಪಿಸಿ ಅಲ್ಲಿ ಬರಹಗಳನ್ನು ಅಗೀಗ ಪ್ರಕಟಿಸುತ್ತಿದ್ದೇವೆ. ಹೀಗೆ ವಿದ್ಯಾರ್ಥಿ ಸಂಘವೊಂದು ಬ್ಲಾಗ್ ಮಾಡಿ ಬರೆಯುತ್ತಿರುವುದು ಕನ್ನಡದ ಮಟ್ಟಿಗೆ ಹೊಸತೆಂದೇ ಹೇಳಬೇಕು. ‘ಯುವಲಹರಿ’ ನಮ್ಮ ಬರಹಗಳಿಗೆ ವೇದಿಕೆಯಾಗಿದ್ದಷ್ಟೇ ಅಲ್ಲ, ತನ್ನದೇ ಆದ ಓದುಗ ವರ್ಗವನ್ನೂ ಸೃಷ್ಟಿಸಿಕೊಂಡಿದೆ. ಜಗತ್ತಿನ ಸುಮಾರು ಇಪ್ಪತ್ತು ದೇಶಗಳಲ್ಲಿನ ಹತ್ತು ಸಾವಿರಕ್ಕೂ ಅಧಿಕ ಕನ್ನಡಿಗರು ಯುವಲಹರಿಯನ್ನು ಓದಿದ್ದಾರೆಂಬುದು ನಮಗೆ ಹೆಮ್ಮೆಯ ಸಂಗತಿ.

ಯುವಲಹರಿಯ ಆಯ್ದ ಬರಹಗಳ ಸಂಗ್ರಹವೇ ಈ ಹೊತ್ತಗೆ…

ನಡೆದು ಬಂದ ಹಾದಿಯನ್ನೊಮ್ಮೆ ಹಿಂದಿರುಗಿ ನೋಡಿದರೆ ವಿಷಾದ ಅಮರಿಕೊಳ್ಳುತ್ತದೆ. ಅಂದುಕೊಂಡಿದ್ದೆಲ್ಲವನ್ನೂ ಕಳೆದ ಮೂರು ವರ್ಷಗಳಲ್ಲಿ ಮಾಡಲಾಗದ್ದರ ಬಗ್ಗೆ ಬೇಸರವಿದೆ. ಇಲ್ಲಿರುವ ಬರಹಗಳನ್ನೊಮ್ಮೆ ಅವಲೋಕಿಸಿದರೆ “ಇನ್ನೂ ಸುಧಾರಿಸಬೇಕಿದೆ” ಎಂದ ಹಲವು ಹಿರಿಯರ ಮಾತಿನಲ್ಲಿ ಅರ್ಥವಿದೆಯೆನಿಸುತ್ತಿದೆ. ಆದರೆ ನಮ್ಮ ಈ ಮೊದಲ ಹೆಜ್ಜೆ ಸಣ್ಣದಾದರೂ ಮಹತ್ವದ್ದು ಎನ್ನುವ ಅರಿವು ನಮಗಿದೆ. ಈ ನಿಟ್ಟಿನಲ್ಲಿ ಮುಂದೆಯೂ ಇನ್ನಷ್ಟು ಕಾಯ್ರಶೀಲರಾಗಬೇಕಾಗ ಜವಾಬ್ದಾರಿ ನಮ್ಮ ಮೇಲಿದೆ.

ಈ ಸಂದರ್ಭದಲ್ಲಿ ನಮ್ಮ ಬರಹಗಳನ್ನೋದಿ ಪ್ರತಿಕ್ರಿಯಿಸಿದ, ನಮ್ಮ ಪ್ರಯತ್ನಗಳಿಗೆ ಬೆನ್ನೆಲುಬಾದ, ಬೆನ್ನುತಟ್ಟಿದ ಸಮಸ್ತರಿಗೂ ಧನ್ಯವಾದಗಳು (ಹೆಸರಿಸಿದರೆ ಉದ್ದ ಪಟ್ಟಿಯೇ ಆದೀತು!). ಜೊತೆಗೇ ನಮ್ಮ ಕಾಲೆಳೆದು, ಇನ್ನಷ್ಟು ಕೆಲಸ ಮಾಡುವ ಛಲ ಹುಟ್ಟಿಸಿದವರಿಗೂ ಪ್ರೀತಿಯ ಧನ್ಯವಾದ!

ಓದುಗರಾದ ನಿಮ್ಮನ್ನು ಮರೆಯಲಾದೀತೇ…?
-ಪ್ರಸನ್ನ ಆಡುವಳ್ಳಿ
(ಕನ್ನಡ ಸಂಘದ ಪರವಾಗಿ)

ಪ್ರವೀಣ್.ಡಿ ಬರೆದ ಕವನಗಳು

ಸಾಮಾನ್ಯ

ನನಗೇಕೆ ನಿನ್ನ ಮಾತು ಮೌನ ಮನದಾಳದ

ಭಾವನೆಗಳ ತಿಳಿಯುವ ಸಂಕಟ

ಬೇಕಿಲ್ಲ ಕವಿಕಲ್ಪನೆ , ಕಥೆ, ಕಾವ್ಯ

ಎಂಬ ಕಪಟದ ಮುಖಪುಟ

ತಿಳಿಸುತ್ತಿದೆ ನಿನ್ನೆಲ್ಲಾ ಭಾವಗಳ

ನಿನ್ನ ಕಣ್ಣ್ಂಚಿನ  ಆ ನೋಟ

ನನಗಷ್ಟೆ ಸಾಕು ನಾ ಅದರಲ್ಲೆ ಸಂತೃಪ್ತ……

******

ಕಲ್ಪನೆಯ  ಕಡಲಲ್ಲಿ

ಪ್ರೀತಿಯ ಹಣತೆಯ ಹಚ್ಚಿ

ಹೇಳದೇ ಹೋದನು ನಾ

ನಿನಗೇ ಹೃದಯ ಬಿಚ್ಚಿ

ನಿನ್ನ ರೂಪ ಲಾವನ್ಯಕ್ಕೆ

ಒಲವಿನ ಬಣ್ಣ ಹಚ್ಚಿ

ಎನ್ನೆದೆಯಲಿ ಚಿತ್ರಿಸುವ

ಮುನ್ನ ಅಳಸಿ ಹೋಯಿತು

ಮಳೆ ವಿರಹ ಬಂದು ಕೋಚ್ಚಿ……

******

 

ನಿನ್ನ ಹೆಜ್ಜೆಯ ಮೇಲೆ

ನನ್ನ ಒಲವಿನ ಹೆಜ್ಜೆ ಇತ್ತು

ನಾ ಬಂದೆ ಗೆಳತಿ

ನಿನ್ನ ಹಿಂದೆ…

ಕಾಣುವ  ಪ್ರೀತಿಯು

ಕಣ್ಣೇದುರು ಇದ್ದರು

ಕಾಣದ ಹೋದೆಯ ನೀ ನನ್ನ

ಮೀನಿನ ಹೆಜ್ಜೆಯು

ಹೆಣ್ಣಿನ ಗೆಜ್ಜೆಯೇ

ತಿಳಿಯಾದೆ ಹೋದನು ನಾ ನಿನ್ನ…

******

 

ಬೆಳದಿಂಗಳ ಸೃಷ್ಟಿಸಿದ ಶಶಿಗೊಂದು ನಮನ

ಪುಲಕಿತ ಮನದಲಿ ನಿನ್ನದೇ ಧ್ಯಾನ

ಪ್ರೀತಿ ಸೃಷ್ಟಿಸಿದ ಆತನಿಗೊಂದು ನಮನ

ಒಪ್ಪಿಕೋ ಗೆಳತಿ ಪ್ರೀತಿಯ ಸಾಕಿನ್ನು ಈ ಮೌನ….

 

******

 

ಮುಗ್ದ ಮನಸಿನ ಮಂದಾರ ನೀನು…

ಕಣ್ಣಲ್ಲಿ ಮೂಡಿದ ಚಿತ್ತರ ನೀನು

ಈ ಹೃದಯದ ಪ್ರತಿ ಬಡಿತವು ನೀನು

ಅಥ೯ವಾಗದ ಭಾವನೆ ನಿನ್ನದು

ಹೇಳಲಾಗದ ಪ್ರೀತಿ ನನ್ನದು…

******

ಗೊತ್ತಿಲ್ಲದೆ ಸುರಿಯುವ ಕಣ್ಣೀರಿಗೂ

ಕಾರಣವಿಲ್ಲದೇ ನರಳುವ ಹೃದಯಕ್ಕೂ

ಕಾರಣ ಒಂದೇ

ಮನಸಿನಲಿ ತುಂಬಿರುವ ಹೇಳಲಾಗದ ಪ್ರೀತಿ

******

ಪ್ರೀತಿ ಇಲ್ಲದಿದ್ದಾಗ ಖುಷಿಇರುತ್ತೆ

ಪ್ರೀತಿ ಇದ್ದಾಗ ನೋವು ಇರುತ್ತೆ

ನೋವು ಬಂದಾಗ ಬದುಕು ಏನು ಅಂತ ಅಥ೯ ಆಗುತ್ತೆ

ಬದುಕಿಗಾಗಿ ಪ್ರೀತಿ ಪ್ರೀತಿಗಾಗಿ ಬದುಕು….

******

ಆಮ್ಲಜನಕ ಎಂಬ ’ಅಮೂಲ್ಯ ಅಮೃತ’ ಮತ್ತು ’ವಿಶೇಷ ವಿಷ’

ಸಾಮಾನ್ಯ

ಆಕ್ಸಿಜನ್ ಅಲಿಯಾಸ್ ಆಮ್ಲಜನಕ ಗೊತ್ತಲ್ಲ? ನಾವಾಡುವ ಪ್ರತೀ ಉಸಿರಿನ ಅಮೂಲ್ಯ ಪ್ರಾಣವಾಯು ಅದು. ಜಗತ್ತಿನ ಬಹುತೇಕ ಜೀವಗಳ ಪಾಲಿನ ಅಮೃತವಿದು. ಕೆಲ ನಿಮಿಷಗಳಷ್ಟರ ಮಟ್ಟಿಗೆ ಆಮ್ಲಜನಕ ಸಿಗಲಿಲ್ಲವೆಂದರೂ ಹೃದಯ ನಿಂತುಹೋಗುತ್ತದೆ.ಆಮ್ಲಜನಕವನ್ನೇ ನಂಬಿಕೊಂಡ ಮಿದುಳೂ ಕೈಕೊಡುತ್ತದೆ.ಇಂತಹ ಅಮೂಲ್ಯ ಗಾಳಿ ಹಿಂದೊಮ್ಮೆ ಜೀವಜಗತ್ತಿಗೆ ವಿಷವಾಗಿ ಪರಿಣಮಿಸಿದ್ದು ನಿಮಗೆ ಗೊತ್ತಾ..?

ಮೂರ್ನಾಲ್ಕು ಬಿಲಿಯನ್ ವರ್ಷಗಳ ಹಿಂದೆ ಈ ಭೂಮಿಯಲ್ಲಿ ಜೀವೋದಯವಾದಾಗ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಿತ್ತು. ಹೀಗಾಗಿ ಬ್ಯಾಕ್ಟಿರಿಯಾಗಳಂತಹ ಮೊದಮೊದಲ ಜೀವಿಗಳು ಆಹಾರದಿಂದ ಶಕ್ತಿಪಡೆಯಲು ಆಮ್ಲಜನಕವನ್ನು ಬಳಸಲೇ ಇಲ್ಲ. ಅಂಥಾ ಜೀವಿಗಳ ಸಂತತಿ ಇಂದಿಗೂ ಇದೆ. ಆದರೆ ಸಯನೋಬ್ಯಾಕ್ಟಿರಿಯಾಗಳೆಂಬ ವಿಶಿಷ್ಟ ’ಜಲಜನಕ ಪ್ರಿಯ’ ಜೀವಿಗಳು ನೀರನ್ನೊಡೆದು ಜಲಜನಕ ಪಡೆದು ಆಮ್ಲಜನಕವನ್ನು ವಾತಾವರಣಕ್ಕೆ ಸೇರಿಸಿಬಿಡುತ್ತಿದ್ದವು.

ಹೀಗೇ ಸುಮಾರು ಎರೆಡು ಬಿಲಿಯನ್ ವರ್ಷಗಳಾಗುವ ಹೊತ್ತಿಗೆ ವಾತಾವರಣದಲ್ಲಿ ಹಿಂದೊಮ್ಮೆ ನಗಣ್ಯ ಎನಿಸಿದ್ದ ಆಮ್ಲಜನಕದ ಪ್ರಮಾಣ ಶೇಕಡಾ ೨೦ರಷ್ಟಾಯಿತು. ನೆನಪಿಡಿ, ಇದೊಂದು ತೀರಾತೀರ ಅಪಾಯಕಾರಿ ಅನಿಲ. ಕಬ್ಬಿಣದಂತಹಾ ಕಬ್ಬಿಣಕ್ಕೇ ತುಕ್ಕು ಹಿಡಿಸಿಬಿಡುತ್ತದೆ. ನಮ್ಮ ದೇಹದ ಮೂಲಾಧಾರಗಳಾದ ರಂಜಕ, ಗಂಧಕಗಳನ್ನೆಲ್ಲಾ ದುರ್ಬಲಗೊಳಿಸುವ ಶಕ್ತಿ ಇದಕ್ಕಿದೆ. ಹೀಗಾಗಿ ಜೀವಜಗತ್ತು ಆಮ್ಲಜನಕದ ವಿರುದ್ದ ಸೆಣೆಸುವುದು ಅನಿವಾರ್ಯವಾಯಿತು. ಕೆಲಜೀವಿಗಳು ಹೊಸ ಹೊಸ ರೂಪ ತಳೆದು ಆಮ್ಲಜನಕವನ್ನು ’ಕೊಲ್ಲುವ’ ಶಸ್ತ್ರಾಸ್ತ್ರ ರೂಪಿಸಿಕೊಂಡವು.ಹಲವು ಸೋಲೊಪ್ಪಿಕೊಂಡು ವಿನಾಶವಾದವು….

ಕುತೂಹಲಕಾರಿ ಸಂಗತಿಯೆಂದರೆ ಹೀಗೆ ಆಮ್ಲಜನಕದ ಪ್ರಮಾಣ ಹೆಚ್ಚಾಗಲು ಕಾರಣವಾದ ಸಯನೋಬ್ಯಾಕ್ಟೀರಿಯಾಗಳು ಅದರಿಂದ ಹೆಚ್ಚಿನ ಶಕ್ತಿ ಪಡೆಯುವ ದಾರಿಯನ್ನೂ ತೋರಿಸಿಕೊಟ್ಟವು. ಇವುಗಳು ಬೇರೆ ಪ್ರಭೇದದ ಜೀವಿಗಳೊಂದಿಗೆ ಕೊಡುಕೊಳ್ಳುವಿಕೆಯನ್ನು ಶುರುವಿಟ್ಟುಕೊಂಡವು. ಕೊನೆಗೆ ಅವುಗಳ ದೇಹದ ಭಾಗಗಳೇ ಆಗಿ ಹೋದವು!

ಹೀಗೆ ದೇಹದ ಒಳಹೊಕ್ಕ ಬ್ಯಾಕ್ಟೀರಿಯಾಗಳೇ ನಮ್ಮ ಜೀವಕೋಶದ ಶಕ್ತಿಕೇಂದ್ರ ’ಮೈಟೋಕಾಂಡ್ರಿಯಾ’ಗಳಾದವೆಂದು ೧೯೭೦ರ ಆರಂಭದಲ್ಲೇ ಲಿನ್ನ್ ಮಾರ್ಗೂಲಿಸ್ ಎಂಬ ವಿಜ್ನಾನಿ ಹೇಳಿದ್ದಳು. ಆದರೆ ಅವಳ ವಿಕಾಸವಾದದ ಹೊಸ ಥಿಯರಿಗೆ ಮನ್ನಣೆ ಸಿಗಲು ವರ್ಷಗಳೇ ಬೇಕಾದವು. ಮೈಟೋಕಾಂಡ್ರಿಯಾಗಳು ತಮ್ಮದೇ ಆದ ಡಿಎನ್ ಎ ಹೊಂದಿ ನಮ್ಮೊಳಗಿದ್ದೂ ನಮ್ಮಂತಾಗದ ಕಥೆ ಇನ್ನೂ ಕುತೂಹಲಕಾರಿ….

ಈ ಜೀವಜಗತ್ತಿನಲ್ಲಿ ಇನ್ನೂ ಏನೇನು ಬೆರಗುಗಳಿವೆಯೋ…?!

-ಪ್ರಸನ್ನ ಆಡುವಳ್ಳಿ

ಕಾಲೇಜಿನಲ್ಲಿ ರೈತ ದಿನಾಚರಣೆ….

ಸಾಮಾನ್ಯ

ಡಿಸೆಂಬರ್ ೨೩ರಂದು ರೈತರ ದಿನ. ಇದರ ಅಂಗವಾಗಿ ನಮ್ಮ ಕಾಲೇಜಿನಲ್ಲಿ ಸರಳ ಸಮಾರಂಭವೊಂದನ್ನು ಹಮ್ಮಿಕೊಳ್ಳಲಾಗಿತ್ತು.ವಿದ್ಯಾರ್ಥಿಗಳು ಒಂದಿಷ್ಟು ರಂಗೋಲಿ ಬರೆದು, ತೆಂಗಿನ ಗಿಡ ನೆಟ್ಟು ಸಂಭ್ರಮಿಸಿದರು. ಇದೋ ಇಲ್ಲಿದೆ ಆ ಕ್ಷಣಗಳ ಒಂದಿಷ್ಟು ಝಲಕ್….ಚಿತ್ರಗಳು: ಗೀತಾ ಕುಮಾರಿ

ರಾಜ್ಯೊತ್ಸವದ ಸಂಭ್ರಮ

ಸಾಮಾನ್ಯ

ಇತ್ತೀಚೆಗೆ ‘ಯುವಲಹರಿ’ ಬಳಗವು ಕೃಷಿಮಹಾವಿದ್ಯಾಲಯ ಹಾಸನದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಸಂಭ್ರಮದಿಂದ ಆಚರಿಸಿತು…ಇದೋ ಇಲ್ಲಿದೆ ಆ ಕ್ಷಣಗಳ ನೆನಪು…

This slideshow requires JavaScript.